ಮೀರ್ ಜಾಫರ್ 
 1691-1765. ಬಂಗಾಲವನ್ನಾಳಿದ ಮೊದಲ ನವಾಬ. ಅರಬ್ ಸಂಜಾತನಾದ ಈತನ ಪೂರ್ಣ ಹೆಸರು ಮೀರ್ ಮುಹಮ್ಮದ್ ಜಾಫರ್ ಖಾನ್. ಈತ ಮೊದಲು 1757-60ರ ತನಕ ಅನಂತರ 1763-65ರ ತನಕ ಎರಡು ಅವಧಿಯಲ್ಲಿ ಬಂಗಾಲವನ್ನು ಆಳಿದ. ಅಲಿವರ್ದಿಖಾನ್‍ನ ಅನಂತರ ಅವನ ಮೊಮ್ಮಗ ಸಿರಾಜುದ್ದೌಲ ಪಟ್ಟಕ್ಕೆ ಬಂದ ಈತ ಮೀರ್ ಜಾಫರ್‍ನನ್ನು ಭಕ್ಷಸ್ಥಾನದಿಂದ ತೆಗೆದು ಹಾಕಿದ. ಇದರಿಂದ ಕುಪಿತಗೊಂಡ ಮೀರ್‍ಜಾಫರ್ ಸಿರಾಜುದ್ದೌಲನನ್ನು ಪದಚ್ಯುತಗೊಳಿಸಲು ಇತರರೊಂದಿಗೆ ಸೇರಿ ಈತ ಒಳಸಂಚು ನಡೆಸಿ 1757 ಜೂನ್ 10ರಂದು ಮದರಾಸಿನಲ್ಲಿದ್ದ ಬ್ರಿಟಿಷ್ ಗವರ್ನರ್ ರಾಬರ್ಟ್ ಕ್ಲೈವನೊಂದಿಗೆ ಒಪ್ಪಂದ ಮಾಡಿಕೊಂಡ. ಒಪ್ಪಂದದಂತೆ ಬಂಗಾಲದಿಂದ ಫ್ರೆಂಚರನ್ನು ಹೊಡೆದೊಡಿಸಲು ಬ್ರಿಟಿಷರು ತನಗೆ ಸಹಕಾರ ನೀಡಬೇಕೆಂದೂ ಪ್ರತಿಯಾಗಿ ತಾನು ಈಸ್ಟ್ ಇಂಡಿಯಾ ಕಂಪನಿಗೆ 500.000 ಪೌಂಡುಗಳನ್ನೂ 250.000 ಪೌಂಡುಗಳ ಹಣವನ್ನು ಕಲ್ಕತ್ತದಲ್ಲಿದ್ದ ಯೂರೊಪಿಯನ್ನರಿಗೂ ಕೊಡುವುದಾಗಿ ಒಪ್ಪಿಕೊಂಡ. ಇದರ ಜೊತೆಗೆ ಬ್ರಿಟಿಷರು ತನ್ನನ್ನು ಬಂಗಾಲದ ನವಾಬನನ್ನಾಗಿ ಮಾಡಬೇಕೆಂದು ಷರತ್ತು ಹಾಕಿ ಬ್ರಿಟಿಷ್ ಸೈನಿಕರಿಗೆ, ನೌಕಾಪಡೆಗಳಿಗೆ ಹಾಗೂ ಕಲ್ಕತ್ತ ನಗರದ ಆಡಳಿತಮಂಡಳಿ ಸದಸ್ಯರಿಗೆ ಅಪಾರವಾಗಿ ಹಣ ನೀಡುವುದಾಗಿ ಮಾತುಕೊಟ್ಟ. ಇದರಂತೆ ಬ್ರಿಟಿಷರು ಯುದ್ಧ ಹೂಡಿದಾಗ 1757ರ ಜೂನ್‍ನಲ್ಲಿ ನಡೆದ ಪ್ಲಾಸಿಕದನದಲ್ಲಿ ಈತನಾಗಲಿ, ಈತನ ಜೊತೆಗಾರರಾದ ಇತರ ಸಂಚುಗಾರರಾಗಲಿ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ. ಈ ಯುದ್ಧದಲ್ಲಿ ಸಿರಾಜುದ್ದೌಲ ಸೋತು ಸೆರೆ ಸಿಕ್ಕಿದ. ಅವನನ್ನು ಮೀರ್ ಜಾಫರನ ಮಗ ಮಿರಾನ್ ಕೊಂದು ಹಾಕಿದ. ಮೀರ್‍ಜಾಫರ ಬಂಗಾಲದ ನವಾಬನಾದ.

	ಒಪ್ಪಂದದಂತೆ ಮೀರ್‍ಜಾಫರ್ ಅಪಾರವಾದ ಲಂಚವನ್ನು ನೀಡಿದ್ದರಿಂದ ಬಂಗಾಲದ ಖಜಾನೆ ಬರಿದಾಯಿತು. ಜೊತೆಗೆ ಬ್ರಿಟಿಷ್ ವರ್ತಕರು ಖಾಸಗಿಯಾಗಿ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಎಲ್ಲ ರಹಸ್ಯದಾರಿಗಳನ್ನು ನೀಡಿದ. 24 ಪರಗಣದ ಆದಾಯವನ್ನೂ ಬ್ರಿಟಿಷರಿಗೆ ಬಿಟ್ಟುಕೊಟ್ಟ. ಇದರಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ನೌಕರವರ್ಗದವರಲ್ಲೂ ಭ್ರಷ್ಟರಿದ್ದರು. ಇದರ ಮಧ್ಯೆ ಇವನ ಮಗ ಮಿರಾನ್ ಸಿಡಿಲಿಗೆ ಸಿಕ್ಕಿ ಸತ್ತ. ಇದರಿಂದ 1760ರಲ್ಲಿ ಕ್ಲೈವ್ ಹೊರಟು ಹೋದ ಮೇಲೆ ಈತ ತನ್ನ ಅಳಿಯ ಮೀರ್ ಕಾಸಿಮನಿಗೆ ಅಧಿಕಾರ ಬಿಟ್ಟು ಕೊಡಬೇಕಾಯಿತು. 1763ರಲ್ಲಿ ಇಂಗ್ಲಿಷರಿಗೂ ಮತ್ತು ಮೀರ್ ಕಾಸಿಮನಿಗೂ ಯುದ್ಧ ನಡೆದಾಗ ಮೀರ್ ಜಾಫರ್‍ನನ್ನು ಮತ್ತೆ ಅಧಿಕಾರಕ್ಕೆ ತರಲಾಯಿತು. ಈ ರೀತಿ ನವಾಬರನ್ನು ಬ್ರಿಟಿಷರು ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡು ಆದಷ್ಟು ಹಣ, ಐಶ್ವರ್ಯವನ್ನು ಲಂಚರೂಪದಲ್ಲಿ ದೋಚಿಕೊಂಡರು. ಮೀರ್ ಜಾಫರ್ ಇಂಗ್ಲಿಷರಿಗೆ ರಿಯಾಯಿತಿ ತೋರಿಸುವುದನ್ನು ಮುಂದುವರಿಸಿದ್ದರಿಂದ ಈತನ ಆರ್ಥಿಕ ಮತ್ತು ರಾಜಕೀಯ ಶಕ್ತಿ ಕುಸಿಯಿತು. ಅಪೀಮಿಗೆ ದಾಸನಾಗಿದ್ದ ಈಗ ಕೊನೆಯಲ್ಲಿ ಕುಷ್ಠರೋಗಪೀಡಿತನಾಗಿ 1765 ಫೆಬ್ರವರಿ 5ರಂದು ತೀರಿಕೊಂಡ.										
(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ